|
| ಬಂತು ಬಂತು ದೀಪಾವಳಿ..... | | - ವೆಂಕಟ್. ಆರ್. ಪೊಳಲಿ |
| ಬುಧವಾರ, 7 ನವೆಂಬರ್ 2007 ( 22:24 IST ) |
|
ಬಂತು ಬಂತು ದೀಪಾವಳಿ! ಎಲ್ಲರ ಮನಸೂರೆಗೊಳ್ಳುವ ಬೆಳಕಿನ ಹಬ್ಬ. ಹಿರಿಯ, ಕಿರಿಯರು, ಬಡವ ಸಿರಿವಂತರೆನ್ನದೆ ಸಮಾನ ಉತ್ಸಾಹದಲ್ಲಿ ಪಾಲ್ಗೊಳ್ಳುವ ಹಬ್ಬ, ದೀಪಗಳ ಹಚ್ಚಿ ತಮ್ಮ ಸಂತೋಷವನ್ನು ಹೊರಗೆಡಹುವ ಬೆಳಕಿನ ಹಬ್ಬ. ಪಟಾಕಿ ಹಚ್ಚಿ ಅದ್ಧೂರಿಯಾಗಿ ಸಂಭ್ರಮಿಸುವ ಸದ್ದಿನ ಹಬ್ಬ, ಇದು ದೀಪಗಳ ಆವಳಿ.
ದೀಪಾವಳಿ, ಹಿರಿಯರಿಗೆ, ಮನೆಮಂದಿಯೆಲ್ಲ ಒಟ್ಟುಸೇರಿ ಸಂತೋಷವನ್ನು ಹಂಚುವ ಬೆಳಕಿನ ಹಬ್ಬವಾದರೆ, ಮಕ್ಕಳಿಗೆ ಪಟಾಕಿಗಳನ್ನು ಸಿಡಿಸುವ ಶಬ್ದ ಸಂಭ್ರಮದ ಹಬ್ಬ. ಬೆಳಕು, ಪಟಾಕಿಗಳಿಂದ ಇದಕೆ ಅಬ್ಬರದ ಸ್ವಾಗತ. ಮನೆಗಳನ್ನು ಬೆಳಕಿನಿಂದ, ಗಗನವನ್ನು ಪಟಾಕಿಗಳಿಂದ ಪ್ರಕಾಶಿಸುವುದು ಆರೋಗ್ಯ, ಸಂಪತ್ತು, ಜ್ಞಾನ, ಶಾಂತಿ ಹೊಂದಲು ಭಗವಂತನಿಗೆ ಮಾಡುವ ವಂದನೆಯ ವಿಧಾನವಾಗಿದೆ. ಒಂದು ನಂಬಿಕೆಯ ಪ್ರಕಾರ ಪಟಾಕಿಗಳ ಸದ್ದು ಭೂಮಿಯಲ್ಲಿ ಜೀವಿಸುವ ಜನರ ಸಂತೋಷದ ಸೂಚಕವಾಗಿದೆ. ಇನ್ನೊಂದು ಸಂಭಾವ್ಯ ಕಾರಣ ಪಟಾಕಿ ಸಿಡಿಸಿ ಸೊಳ್ಳೆ ಮುಂತಾದ ಕ್ರಿಮಿಗಳನ್ನು ನಿರ್ನಾಮ ಮಾಡುವುದು! ಇದು ವೈಜ್ಞಾನಿಕ ಕಾರಣ!.
ಒಟ್ಟಿನಲ್ಲಿ ಬಹುತೇಕ ಮಂದಿಗೆ ದೀಪಾವಳಿ ಎಂದರೆ ಬೀಡಿ ಪಟಾಕಿ, ಲಕ್ಷೀ ಪಟಾಕಿ, ಓಲೆ ಪಟಾಕಿ, ಮಳೆ ಪಟಾಕಿ, ಮಾಲೆ ಪಟಾಕಿ, ಬಾಣ ಪಟಾಕಿ...... ಇನ್ನೆನೇನೋ...
ನರಕ ಚತುದರ್ಶಿಯಿಂದ ಪ್ರಾರಂಭವಾಗಿ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿಯಾದಿಯಾಗಿ ಯಮ ದ್ವಿತೀಯದಲ್ಲಿ ಕೊನೆಗೊಳ್ಳುವ ಈ ಐದು ದಿನಗಳ ಅದ್ದೂರಿ ಸಂಭ್ರಮದ ದೀಪಾವಳಿಯಾದ್ಯಂತ ಕುಷಿ, ಸಂತೋಷ, ಪಟಾಕಿ, ಪಟಾಕಿ ಮತ್ತು ಪಟಾಕಿ. ಹಬ್ಬ ಪ್ರಾರಂಭದ ಮುನ್ಸೂಚನೆಯಾಗಿ ಕೆಲವು ದಿನಗಳ ಮೊದಲೇ ಆರಂಭವಾಗುವ ಪಟಾಕಿ ಸದ್ದು, ಮಕ್ಕಳ ಕುತೂಹಲವನ್ನು ಕೆರಳಿಸಲು ಪ್ರಾರಂಭಿಸುತ್ತದೆ. ಹಬ್ಬ ಸನಿಹವಾದಂತೆ, ನಕ್ಷತ್ರ ಕಡ್ಡಿ, ಮಳೆ ಪಟಾಕಿ, ಸುದರ್ಶನ ಚಕ್ರ, ಮಾಲೆ ಪಟಾಕಿ, ಬೀಡಿ ಪಟಾಕಿ, ರಾಕೆಟ್ ಹೀಗೆ ಮಕ್ಕಳಿಗಿಂತ ಉದ್ದದ ಮಕ್ಕಳ ಪಟಾಕಿ ಪಟ್ಟಿ ಅಪ್ಪನ ಎದುರು ಹಾಜರ್.
ವರ್ಷದಲ್ಲಿ ದೀಪಾವಳಿ ಸಮಯದಲ್ಲಿ ಮಾತ್ರ ಸೂರ್ಯ ಇಣುಕುವ ಮೊದಲೇ ಸ್ವಯಂ ಪ್ರೇರಿತವಾಗಿ ಮಕ್ಕಳು ಹಾಸಿಗೆ ಬಿಟ್ಟೇಳುತ್ತಾರೆ. ಸಾಂಪ್ರದಾಯಿಕ 3 ಗಂಟೆಯ ಎಣ್ಣೆ ಸ್ನಾನ. ಇದು ಹೆತ್ತವರ ಒತ್ತಾಯಕ್ಕೆ ಮಾಡಬೇಕಾದ ಕಟ್ಟಳೆ. ನಂತರ ಬರುವುದು ಬಹು ಕಾತರದ, ಬಹು ನಿರೀಕ್ಷಿತ ಪಟಾಕಿ ದೂಂ ದಾಂ.....
ಯಾವ ಪಟಾಕಿ ಮೊದಲು ಸಿಡಿಸುವುದು, ಯಾರು ಮೊದಲು ಪಟಾಕಿ ಸಿಡಿಸುವುದು ಇದು ಮಕ್ಕಳ ಮುಂದೆ ಬರುವ ತಕ್ಷಣದ ಗೊಂದಲ. ತನ್ನ ಪಕ್ಕದ ಮನೆಯ ಹುಡುಗ ಹೆಚ್ಚಿನ ಪಟಾಕಿ ಸಿಡಿಸಿದ್ದಾನೇಯೋ ಎಂಬುದು ನಂತರ ಬರುವ ಕುತೂಹಲ. ಪಕ್ಕದ ಮನೆ ಹುಡುಗ ಯಾವ ವಿಧದ ಪಟಾಕಿ ಸಿಡಿಸಿದ್ದಾನೆ? ಆ ಪಟಾಕಿ ನಮ್ಮಲಿದೆಯೇ ಹೀಗೆ ನಾನಾ ರೀತಿಯ ತುಮುಲಗಳು ಅವರ ಮನಸ್ಸಿನಲ್ಲಿ ಸುಳಿದಾಡುತ್ತಿರುತ್ತವೆ.
ಪಕ್ಕದ ಮನೆಯವರಿಗಿಂತ ತಾನು ಹಿಂದೆ ಬೀಳಬಾರದು. ಅತ್ತ ಲಕ್ಷೀ ಪಟಾಕಿ ಸಿಡಿದರೆ, ಇತ್ತ ಮಾಲೆ ಪಟಾಕಿ, ಅತ್ತ ಮಳೆ ಪಟಾಕಿ ಸಿಡಿದರೆ ಈ ಕಡೆಯಿಂದ ರಾಕೆಟ್ ಹಾರಾಟ ಹೀಗೆ ಭಯಂಕರ ಸ್ಫರ್ಧೆ ನಡೆಯುತ್ತಿರುತ್ತದಂತೆಯೇ ಈ ಕಡೆಯಿಂದ ತಂದೆ ತಾಯಿಯರ ಸತತ ಎಚ್ಚರಿಕೆಯ (ವ್ಯರ್ಥ) ಗಂಟೆ.
ಕೈಯಿಂದ ಆಕಾಶದತ್ತ ಎಸೆದ ನೆಚ್ಚಿನ ಬೀಡಿ ಪಟಾಕಿ ಸದ್ದಿಲ್ಲದೆ ಕೆಳಕ್ಕೆ ಬಿದ್ದರೆ ಅದರ ಸನಿಹ ಹೋಗುವ ಹುಚ್ಚು ಸಾಹಸ, ನಿರೀಕ್ಷಿತ ಸದ್ದು ಮಾಡದೆ ಠುಸ್ಸೆಂದರೆ ನಂತರ ಪಟಾಕಿ ಅಂಗಡಿಯವನ ವಿರುದ್ಧ ಸಿಡಿ ಮಿಡಿ. ರಾತ್ರಿ ಸಿಡಿಯದೇ ಹೋದ ಪಟಾಕಿಗಾಗಿ ಮರುದಿನ ಬೆಳಗ್ಗಿನ ಹುಡುಕಾಟ. ತದನಂತರ ಪ್ರಾರಂಭವಾಗುತ್ತದೆ ಗೆಳೆಯರೊಂದಿಗಿನ ತಮ್ಮ ವರ್ಣಮಯ ಸಾಹಸ ಗಾಥೆ. ತಾವು ಸಿಡಿಸಿದ ಪಾಟಕಿಗಳ ಪಟ್ಟಿ, ಸಿಡಿಸಿದ ರೀತಿ, ಸಿಡಿದ ಬಗೆ ಹೀಗೆ ಸಾಗುತ್ತದೆ ಸುಡುಮದ್ದಿನ ಗಂಭೀರ ಚರ್ಚೆ.
ದಿನ ಪೂರ್ತಿ ಪಟಾಕಿಯಲ್ಲೇ ಮುಳುಗಿರುವ ಮಕ್ಕಳಿಗೆ ಹಬ್ಬದ ಆ ನಾಲಕ್ಕು ದಿನ ಇತರ ವಿಚಾರಗಳ ಅರಿವೇ ಇರುವುದಿಲ್ಲ. ನಾಲಕ್ಕು ದಿನವೂ ಪಟಾಕಿ ಲೋಕದಲ್ಲೇ ಇರುವ ಮಕ್ಕಳು, ಊಟ, ತಿಂಡಿ, ನಿದ್ದೆ ಎಲ್ಲವನ್ನೂ ಪಟಾಕಿ ಜತೆ ಸಿಡಿಸಿರುತ್ತಾರೆ. ಅಂತಿಮವಾಗಿ ದೀಪಾವಳಿ ಜಾತ್ರೆಯ ಬೀಳ್ಕೊಡುಗೆ ಅಂದರೆ ಪಟಾಕಿ ಹಬ್ಬದ ಪ್ರಾಯಾಸದ, ತ್ರಾಸದಾಯಕ ಬೀಳ್ಕೊಡುಗೆ.
ಇನ್ನೂ ಸ್ವಲ್ಪ ದಿನ ಇರಬಾರದೇ ಈ ದೀಪಾವಳಿ ಎಂಬ ಹುಚ್ಚು ಆಸೆ. ತಮ್ಮ ಪಟಾಕಿ ಜಾತ್ರೆಗೆ ಸಂಪೂರ್ಣ ಗುಡ್ ಬಾಯ್ ಹೇಳದೆ ಪಟಾಕಿ ಬಗ್ಗೆಯೇ ಕನವರಿಸುತ್ತಿರುತ್ತದೆ ಆ ಪಟಾಕಿ ಮನಸು...
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಕಥೆ - ಭೈರಪ್ಪನವರ ದಾಟು ಕಾದಂಬರಿಯಲ್ಲಿ ಬರುವ ಕಥಾನಾಯಕಿ ಸತ್ಯಳ ಪಾತ್ರ ವಿಭಿನ್ನ ಅದೇ ಅವಳ ತಿರಸ್ಕೃತ ಪ್ರೇಮವೇ ಕಥಾ ವಸ್ತು ಎಂದು ಮನಸ್ಸು ಪದೇ ಪದೇ ಹೇಳುವ ಪ್ರಯತ್ನ ಮಾಡುತ್ತಿದ್ದರೂ ಅಲ್ಲ ಅದಲ್ಲ ನಿಜ ಬದುಕಿನಲ್ಲಿ ಇದು ಸಾಧ್ಯವಾ... |
| |
|
|
|
|
 | | AP |
| | |
| |
|
|
|
|
|
| ಚಿತ್ರ ಸಮೀಕ್ಷೆ - ಆರ್.ಎಸ್.ಗೌಡ ನಿರ್ಮಾಣದ, ಎಸ್.ಮಹೇಂದರ್ ನಿರ್ದೇಶನದ, ಶಿವರಾಜ್ ಕುಮಾರ್ ನಿರ್ದೇಶನದ "ಗಂಡನ ಮನೆ" ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. |
| |
|
|
|
|
|
|
|