|
| 'ಪರ್ಯಾಯ' ಸಂಪ್ರದಾಯಕ್ಕೆ ಪರ್ಯಾಯ |
ಭಜಕ ಸಮುದಾಯದ ಸಾಂಪ್ರದಾಯಿಕ ನಿರೀಕ್ಷೆಗೆ ವ್ಯತಿರಿಕ್ತವಾಗಿ ಶುಕ್ರವಾರ ನಡೆದ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ವಿದ್ಯುಕ್ತ ಸರ್ವಜ್ಞ ಪೀಠಾರೋಹಣ ಸಂಪ್ರದಾಯ ಹರಣದ ಕಪ್ಪು ಚುಕ್ಕಿಯನ್ನು ಮೂಡಿಸಿತು. ಇತರ ಏಳು ಯತಿಗಳ ಉಪಸ್ಥಿತಿ ಇಲ್ಲದೆಯೇ ಏಕಾಂಗಿಯಾಗಿ ಪುತ್ತಿಗೆ ಶ್ರೀಗಳು ಪೀಠ ಏರಿದ್ದು, 750 ವರ್ಷಗಳ ಇತಿಹಾಸ ಹೊಂದಿರುವ ಮಠದ ಅಧ್ಯಾಯದಲ್ಲಿ ಬೇರೆಯದೇ ಆದ ಅಧ್ಯಾಯವನ್ನು ಸೇರಿಸಿದೆ.
ಈ ಭಾರೀಯ ಪುತ್ತಿಗೆ ಶ್ರೀಗಳು ಪರ್ಯಾಯಕ್ಕೆ ಪೂರ್ವಭಾವಿಯಾಗಿ ಎಲ್ಲೆಡೆ ಸಂಚಾರ ಪೂರೈಸಿಕೊಂಡು ಉಡುಪಿ ಪುರ ಪ್ರವೇಶ ಮಾಡುವಲ್ಲಿಂದಲೇ ಸಾಂಪ್ರದಾಯಿಕ ಆಚರಣೆಗಳಿಗೆ ಕತ್ತರಿ ಬಿದ್ದಿದೆ.
ಪುತ್ತಿಗೆ ಶ್ರೀಗಳು ಉಡುಪಿ ಪುರ ಪ್ರವೇಶ ಮಾಡುವ ಸಂದರ್ಭದಲ್ಲಿ ಅವರನ್ನು ಹಿಂದಿನ ಪರ್ಯಾಯ ಪೀಠಾಧೀಶರಾದ ಕೃಷ್ಣಾಪುರ ಮಠಾಧೀಶರು ಸ್ವಾಗತಿಸಬೇಕಿತ್ತು. ಆದರೆ ಇದು ನಡೆಯಲಿಲ್ಲ. ಇದಷ್ಟೇ ಅಲ್ಲದೇ, ಪುತ್ತಿಗೆ ಶ್ರೀಗಳು ಸರ್ವಜ್ಞ ಪೀಠವೇರುವುದಕ್ಕೆ ಮುಂಚಿತವಾಗಿ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥರಿಗೆ ಸನ್ಮಾನ ನಡೆಯಬೇಕಿತ್ತು. ಆದರೆ ವಿವಾದದಿಂದಾಗಿ ಅದೂ ನಡೆಯಲಿಲ್ಲ.
ಭಾವೀ ಪರ್ಯಾಯ ಪೀಠಾಧಿಪತಿಗಳು ಸರ್ವಜ್ಞ ಪೀಠವನ್ನೇರುವ ಮುನ್ನ ಉಳಿದ ಏಳೂ ಮಠಾಧೀಶರನ್ನು ಆದರಿಸಿ, ಅವರ ಪಾದ ಪೂಜೆಯನ್ನು ನಡೆಸಬೇಕಾದದ್ದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಒಂದು ಸತ್ ಸಂಪ್ರದಾಯ ಹಾಗೂ ಆಚರಣೆ. ಇಂಥ ಸಂಪ್ರದಾಯಕ್ಕೂ ಈ ಬಾರಿಯ ಪರ್ಯಾಯದಲ್ಲಿ ಭಂಗ ಉಂಟಾಗಿತ್ತು. ಪೇಜಾವರರು ಉಪವಾಸ ಆಚರಿಸುತ್ತಿದ್ದ ಸಂದರ್ಭದಲ್ಲಿ ಅವರೊಂದಿಗೆ ಸಮಾಲೋಚಿಸಲು ಹೋದ ಪುತ್ತಿಗೆ ಶ್ರೀಗಳು ಅವರಿಗೆ ಪಾದಾಭಿವಂದನೆ ಮಾಡಿ ಆಶೀರ್ವಾದ ಪಡೆದರೇ ವಿನಃ ಸಂಪ್ರದಾಯ ರೀತ್ಯ ಪಾದಪೂಜೆ ಮಾಡಲಿಲ್ಲ ಎಂಬುದಿಲ್ಲಿ ಗಮನಾರ್ಹ.
ಇದೆಲ್ಲಕ್ಕಿಂತ ಮಿಗಿಲಾದದ್ದೆಂದರೆ, ಪರ್ಯಾಯ ಪೀಠವೇರುವ ಮಠಾಧಿಪತಿಗಳು ಜೋಡುಕಟ್ಟೆಯಿಂದ ಉಡುಪಿಯವರೆಗೆ ಮೆರವಣಿಗೆಯಲ್ಲಿ ಬರುವಾಗ ಉಳಿದ ಏಳು ಮಠಾಧಿಪತಿಗಳೂ ಇದರಲ್ಲಿ ಪಾಲ್ಗೊಳ್ಳಬೇಕು ಹಾಗೂ ದರ್ಬಾರ್ ಉತ್ಸವದಲ್ಲಿಯೂ ಆಸೀನರಾಗಿರಬೇಕು. ಇದಂತೂ ಈ ಬಾರಿ ಕಂಡು ಬರಲೇ ಇಲ್ಲ. ಈ ಗೈರುಹಾಜರಿ ಎಷ್ಟರಮಟ್ಟಿಗೆ ಎದ್ದು ಕಾಣುತ್ತಿತ್ತೆಂದರೆ, ಗುರುವಾರದ ತನಕ ಪುತ್ತಿಗೆ ಶ್ರೀಗಳ ನೆರಳಿನಂತೇ ಇದ್ದ ಶಿರೂರು ಮಠದ ಸ್ವಾಮೀಜಿಯವರೂ ಇಂದು ಬೆಳಗಿನ ಆಚರಣೆಗಳ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಇವರಾದರೂ ಕೊನೇವರೆಗೆ ಪುತ್ತಿಗೆ ಶ್ರೀಗಳ ಜೊತೆಯಲ್ಲಿದ್ದು ಬೆಂಬಲ ಕೊಡುತ್ತಾರೆ ಎಂಹ ಭಕ್ತಾದಿಗಳ ನಂಬಿಕೆ ಸುಳ್ಳಾಯಿತು.
ಸರ್ವಜ್ಞ ಪೀಠವನ್ನೇರುವ ಸಂದರ್ಭದಲ್ಲಿ ಹಿಂದಿನ ಪರ್ಯಾಯ ಪೀಠಾಧಿಪತಿಗಳು ಅಕ್ಷಯ ಪಾತ್ರೆ, ಸಟ್ಟುಗ ಹಾಗೂ ಕೀಲಿಕೈಗಳನ್ನು ಕೈಯಿಂದ ಹಸ್ತಾಂತರ ಮಾಡಬೇಕಿತ್ತು. ಆದರೆ ಇದನ್ನು ಹಸ್ತಾಂತರಿಸಿದ್ದು ಅಷ್ಟಮಠಗಳ ಉಪಮಠವಾದ ಭೀಮನಕಟ್ಟೆ ಮಠದ ರಘುಮಾನ್ಯ ತೀರ್ಥ ಸ್ವಾಮೀಜಿ. ಇನ್ನೂ ಆಸಕ್ತಿದಾಯಕ ವಿಷಯವೆಂದರೆ, ಪಲಿಮಾರು, ಕಾಣಿಯೂರು, ಪೇಜಾವರ ಕಿರಿಯ ಸ್ವಾಮಿಗಳು, ಅದಮಾರು ಹಿರಿಯ ಮತ್ತು ಕಿರಿಯ ಸ್ವಾಮಿಗಳು ಮಠದ ಆವರಣವನ್ನೇ ಬಿಟ್ಟು ಪರಸ್ಥಳ ಸೇರಿಕೊಳ್ಳುವ ಮೂಲಕ ನಾಪತ್ತೆಯಾಗಿದ್ದರು.
ಇದಕ್ಕಿಂತ ಮುಂಚಿತವಾಗಿ, ನಿನ್ನೆ ತಡರಾತ್ರಿಯವರೆಗೂ ರಾಘವೇಂದ್ರ ಮಠ, ಪೇಜಾವರ, ಪಲಿಮಾರು ಮಠದ ಸ್ವಾಮಿಗಳು ಕುಳಿತು ಮಾತುಕತೆ ನಡೆಸಿದರಾದರೂ ಒಂದು ಒಮ್ಮತಕ್ಕೆ- ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಹಿಂದೆ ಸಮುದ್ರೋಲ್ಲಂಘನವಾಗಿದೆ ಎಂಬ ಒಂದೇ ಒಂದು 'ಉಲ್ಲಂಘನೆ'ಯ ಕುರಿತಾಗಿ ಮಾತುಕತೆಗಳು ಕೇಳಿಬರುತ್ತಿದ್ದವು.
ಸಾಗರೋಲ್ಲಂಘನದ ವಿಚಾರದಲ್ಲಿ ವಿವಾದಕ್ಕೀಡಾದ ಈ ಬಾರಿಯ ಪರ್ಯಾಯದಲ್ಲಿ ಸಂಪ್ರದಾಯಗಳ ಸಾಗರವನ್ನೇ ಉಲ್ಲಂಘಿಸಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿಕಿತ್ಸೆ - ಒತ್ತಡದ ಸಂದರ್ಭದಲ್ಲಿ ನಾವು ಪ್ರಶಾಂತವಾಗಿ, ನಿರಾಳವಾಗಿ ಇರುವುದನ್ನು ಕಲಿಯುವುದರಿಂದ ಸಮಸ್ಯೆ ಸುಲಭವಾಗಿ ಬಗೆಹರಿಯಬಹುದು ಮತ್ತು ಆರೋಗ್ಯಕಾರಿ ಜೀವನಕ್ಕೂ ಸಹಕಾರಿಯಾಗುತ್ತದೆ. |
| |
|
|
|
|
|
|
|
|
|
| ಪ್ರೇಮಗಾಥೆ - ನೀನಂದು ನನ್ನ ಮೊಬೈಲ‌್‌ಗೆ ಕರೆ ಮಾಡಿದಾಗ ಕೇಳಲಿಲ್ಲವಾ ಯಾಕೆ ಈ ಹಾಡನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿದ್ದೀಯಾ ಅಂತ? ನಿನಗೆ ಈ ಹಾಡು ನೆನಪಿದೆಯಾ ಅನು?..ಅಂದು ನಮ್ಮ ಕಾಲೇಜ್ ಡೇಗೆ ನೀನು ನನಗೆ ಡೆಡಿಕೇಟ್ ಮಾಡಿದ್ದು ಈ ಹಾಡನ್ನೇ ಅಲ್ವಾ.. |
| |
|
|
|
|
|
|
|