|
| ಮಸುಕು ಮನಸ್ಸಿನ ಮೋಟುಗೋಡೆಯಾಚೆ... | |
"ನಿನ್ನ ಬದುಕಿನ ಸಂಪೂರ್ಣ ಜವಾಬ್ದಾರಿಯನ್ನು ನೀನು ಹೊತ್ತುಕೊಂಡಾಗ ಮಾತ್ರ, ನಿನಗೆ ನಿನ್ನಲ್ಲಿರುವ ಅಂತಃಶಕ್ತಿಯ ಅರಿವಾಗುತ್ತದೆ". ಆ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಂಡ ಬಶೀರ್. ತಂಗಿ ಗುಡಿಯಾಳ ಕನ್ನಡ ಪುಸ್ತಕದೊಳಗಿನ ಸ್ವಾಮಿ ವಿವೇಕಾನಂದ ಪಾಠ, ಅವನ ಮನಸ್ಸಿನ ಮೇಲೆ ನೇರವಾಗಿ ನಾಟಿತ್ತು. ಯಾಕೋ ಮೂರು ನಾಲ್ಕು ದಿವಸಗಳಿಂದ ಮನಸ್ಸು ಸರಿಯಿಲ್ಲವೆಂದು ಅನಾಸಕ್ತಿಯಿಂದ ಮಲಗಿದ್ದವನಿಗೆ ಈ ಸಾಲುಗಳು ತಿವಿದಂತಾಯಿತು.
"ನಿನಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವನಿರುವ ಸುಲೇಮಾನ್ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಾನೆ. ಪಾಪ, ಆ ಎಳೆಯ ಜೀವ ಕುಟುಂಬಕ್ಕಾಗಿ ಎಷ್ಟು ಕಷ್ಟಪಡುತ್ತಿದೆ. ನಿನ್ನನ್ನು ಓದಿಸಿದ್ದೇ ತಪ್ಪಾಯ್ತು, ಮಾಡಲು ಬೇಕಾದಷ್ಟು ಕೆಲಸಗಳಿವೆ, ನೀನು ಬಯಸಿದ ಕೆಲಸವೇ ಬೇಕು ಎಂದು ಕುಳಿತರೆ ಕೆಲಸ ಎಲ್ಲಿಂದ ಸಿಗುತ್ತದೆ, ಎಲ್ಲದಕ್ಕೂ ಮೊದಲು ಮನಸ್ಸು ಬೇಕು". ನಡುಮನೆಯ ಪಡಸಾಲೆಯೊಳಗೆ ನಿಂತು ಉಮ್ಮ ಹೇಳಿದ್ದರಲ್ಲಿ ವಾಸ್ತವ ಇರದೇ ಇರಲಿಲ್ಲ ಎಂದು ಅವನಿಗೂ ಅನಿಸಿತು. ನಾನಾದರೂ, ಏನೂ ಮಾಡಲಿ. ಸಿವಿಲ್ ಓದಿದ್ದೇನೆ. ಕೈತುಂಬಾ ಹಣ ಗೌರವ ಸಿಗುವ ಕೆಲಸವೊಂದು ಸಿಕ್ಕಿದರೆ ನಾನೂ ಮಾಡಲು ಸರಿ, ಆದರೇ ಕೆಲಸವೇ ಸಿಗುತ್ತಿಲ್ಲವಲ್ಲಾ? ಹಾಗೆಂದು ಯೋಚಿಸುತ್ತಲೇ ತನ್ನ ದಿನಪತ್ರಿಕೆ ಮೂಲೆಯಲ್ಲಿ ಬೇಕಾಗಿದ್ದಾರೆ ಕಾಲಂನಲ್ಲಿ ಮುಖ ಹುದುಗಿಸಿದ.
ಮತ್ತೆ ವಿವೇಕಾನಂದರ ಮಾತುಗಳು ಎಚ್ಚರಿಸಿದವು. ಬಶೀರ್ ವಿಚಾರ ಮಗ್ನನಾದ. ಮೀನುಗಾರ ಕುಟುಂಬವೊಂದರಲ್ಲಿ ಹುಟ್ಟಿದ ತನ್ನನ್ನು ದೊಡ್ಡ ಎಂಜಿನೀಯರ್ ಮಾಡಬೇಕೆಂಬುದು ಅಪ್ಪನ ಆಸೆ. ರಾತ್ರಿ ಸಮುದ್ರ ದಂಡೆಯ ಮೇಲೆ ನಡೆಯುತ್ತಾ, ಆಗಸದಲ್ಲಿ ಮೂಡುತ್ತಿದ್ದ ನಕ್ಷತ್ರಗಳನ್ನು ತೋರಿಸುತ್ತಾ ಅಪ್ಪ ಹೇಳುತ್ತಿದ್ದ. ನೋಡು ಮಗ, ನಾನು ಸತ್ತರೂ, ಈ ರೀತಿ ಆಗಸದಲ್ಲಿದ್ದುಕೊಂಡು ನಿನ್ನ ಯಶಸ್ಸನ್ನು ನೋಡಿ ಸಂತೋಷಪಡುತ್ತೇನೆ. ಮಗನ ಇಷ್ಟಸಿದ್ಧಿಗಾಗಿ ಕಷ್ಟಪಷ್ಟು ದುಡಿದ ತಂದೆ, ಕೊನೆಗೊಂದು ದಿನ ಬಳಲಿ ಬೆಂಡಾದ ಜೀವದಲ್ಲಿ ಜೀವ ಚೈತನ್ಯ ಕೂಡ ಇಲ್ಲದಂತೆ ಕೃಶವಾಗಿ ಮರೆಯಾದಾಗ ಬಶೀರ್ ಬುಡ ಕಡಿದ ಬಾಳೆಯಂತೆ ಕುಸಿದು ಬಿದ್ದಿದ್ದ.
ತಂದೆಯ ನಿಧನದ ನಂತರ ಕಸ ಮುಸುರೆ ತೊಳೆದು ನಾಲ್ಕು ಮಕ್ಕಳ ಕುಟುಂಬವನ್ನು ಪೋಷಿಸಲು ತಾಯಿ, ನಿಂದನೆ ಅವಮಾನಗಳನ್ನು ಸಹಿಸಬೇಕಾಗಿ ಬಂದರೂ ಹಿರಿಯ ಮಗನ ಓದಿಗೆ ಅಡ್ಡಿಮಾಡಲಿಲ್ಲ. ಅಣ್ಣನ ಓದಿಗೆ ತಾನು ಅಡ್ಡಿಯಾಗಬಾರದೆಂದು ಎರಡನೇ ತಮ್ಮ ಸುಲೇಮಾನ್ ಗ್ಯಾರೇಜ್ ಕೆಲಸಕ್ಕೆ ಸೇರಿಕೊಂಡು ತಾಯಿಯೊಂದಿಗೆ ಸಂಸಾರದ ನೊಗ ಹೊತ್ತುಕೊಂಡ. ಅಳಿದುಳಿದ ಚಿಲ್ಲರೆಗಳನ್ನು ಕೂಡಿಟ್ಟು, ಶ್ರೀಮಂತರ ಮನೆಯ ಹಳೆಯ ಬಟ್ಟೆಗಳನ್ನು ತಂದು ತಮ್ಮ ತಂಗಿಯನ್ನು ಪೋಷಿಸಿದ ತಾಯಿ, ತನ್ನ ಖರ್ಚಿಗೂ ಹಣ ಹಣ ನೀಡುವಾಗ ಆತನ ಕಣ್ಣಲ್ಲಿ ಕಣ್ಣೀರು ಜಿನುಗುತ್ತಿದ್ದವು. ಆಗೆಲ್ಲಾ ಅಕ್ಷರ ಕಲಿಯದ ತಾಯಿ, ಅಪ್ಪನ ಪೊಟೋ ಎದುರಿಗೆ ನಿಂತುಕೊಂಡು, ಹೇಳುತ್ತಿದ್ದರು, "ಬಾಪಾ ಇದ್ದಿದ್ದರೆ, ನಿನ್ನ ಗೆಲುವು ನೋಡಿ ತುಂಬಾ ಸಂತೋಷಡುತ್ತಿದ್ದರು ಕಂದಾ, ನೀನು ಓದಿ ನಿನ್ನ ತಮ್ಮ ತಂಗಿಯನ್ನು ಸಾಕಬೇಕು. ಏನೇ ಕಷ್ಟ ಬಂದರೂ, ಪ್ರಾಮಾಣಿಕತೆಯನ್ನು ಮರೆಯಬೇಡ." ತಾಯಿಯ ನೈತಿಕ ಪಾಠಗಳು ಆತನನಲ್ಲಿ ಏನೋ ಸ್ಫೂರ್ತಿ ತುಂಬುತ್ತಿದ್ದವು.
ಹಬ್ಬಗಳು ಹಾಗೂ ರಜಾ ದಿನಗಳಂದು ಉರಿಗೆ ಬಂದಾಗ, ಇನ್ನು ಎಷ್ಟು ದಿನ ಓದಬೇಕು ಬಶೀರ್, ನೀನು ನಮ್ಮೊಂದಿಗೆ ಮೀನು ಹಿಡಿಯಲು ಬಂದಿದ್ದರೆ, ಇಷ್ಟೊತ್ತಿಗೆ ಬೋಟ್ ಮ್ಯಾನೇಜರ್ ಆಗುತ್ತಿದ್ದೆ ಎಂದು ವಾರಿಗೆಯ ಹುಡುಗರು ಹೇಳುತ್ತಿದ್ದರು. ಇನ್ನೇನು ತನ್ನ ಓದು ಮುಗಿಯಲು ಎರಡು ತಿಂಗಳುಗಳು ಮಾತ್ರ ಬಾಕಿ ಇದೆ. ನಂತರ ಕೈತುಂಬಾ ಸಂಬಳ ಸಿಗುವ ಕೆಲಸವೊಂದು ತನಗೆ ದೊರೆಯಲಿದೆ ಎಂದು ಆತ ಮನಸ್ಸಿನಲ್ಲಿಯೇ ಸಮಾಧಾನ ಮಾಡಿಕೊಂಡಿದ್ದ.
ಆದರೆ, ತನ್ನ ಓದು ಮುಗಿಯುತ್ತಿದ್ದಂತೆ, ಆತನಿಗೆ ಕೆಲಸ ಸಿಗುವುದು ಎಷ್ಟು ಕಷ್ಟ ಅನ್ನುವುದು ಗೊತ್ತಾಯಿತು. ಕೆಲಸ ಕೊಡುತ್ತೇನೆ ಎಂದು ಹೇಳಿದ್ದವರು ಅಳಿದುಳಿದ ಚಿಲ್ಲರೆಗಳನ್ನು ಬಾಚಿಕೊಂಡು ಆಮೇಲೆ ಭೇಟಿಯಾಗು ಎಂದು ಹೇಳಿ ಮರೆಯಾದರು. ವಾಪಸ್ಸು ಉರಿಗೆ ಬಂದವನು ಅತ್ತ ಕೆಲಸವೂ ಇಲ್ಲದೆ, ಇತ್ತ ಮನೆಯಲ್ಲೂ ಕೂರಲಾಗದೇ ವಿಚಿತ್ರ ತಳಮಳಕ್ಕೆ ಸಿಲುಕಿಹಾಕಿಕೊಂಡಿದ್ದ. ಕಳೆದ ಹದಿನೈದು ದಿನಗಳಲ್ಲಿ ಬದುಕು ಎನ್ನುವುದು ಎಷ್ಟು ಕಷ್ಟ ಎನ್ನುವುದು ಆತನಿಗೆ ಸ್ಪಷ್ಟವಾಗಿತ್ತು. ಮನೆಯೊಳಗಿನ ಒಲೆ ಉರಿಯಾಬೇಕಾದರೆ, ತಾಯಿ ರಕ್ತ ಬೆವರು ಒಂದು ಮಾಡಿ ದುಡಿಯಬೇಕೆನ್ನುವುದು ಅವನಿಗೆ ಹತ್ತಿರದಿಂದ ತಿಳಿಯುತ್ತಿದ್ದಂತೆ, ತಾನು ಇನ್ನು ಬದುಕಿರುವುದು ನಿಷ್ಪ್ರಯೋಜಕ ಎನ್ನುವ ತೀರ್ಮಾನಕ್ಕೆ ಆತ ಬಂದುಬಿಟ್ಟಿದ್ದ.
ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದವನಿಗೆ ಸ್ವಾಮಿ ವಿವೇಕಾನಂದ ಅವರ ಪುಟ್ಟ ಪಾಠ, ಅಗಾಧ ಮಾನಸಿಕ ಪರಿವರ್ತನೆಯನ್ನು ಮಾಡಿತ್ತು. ಯಾರ ಬದುಕೂ ಬದುಕಲಾಗದಷ್ಟು, ಬದುಕಬಾರದಷ್ಟು ನಿಕೃಷ್ಟವಲ್ಲ ಎನ್ನುವ ಸತ್ಯ ಅರಿವಾಗುತ್ತಿದ್ದಂತೆ, ತನ್ನ ಹೇಡಿತನದಿಂದ ಹೊರಬಂದ. ತನಗೆ ಕಲಿಸಿದ ಉರಿನ ಹಿರಿಯ ಶಿಕ್ಷಕರನ್ನು ಭೇಟಿಯಾಗಿ, ತನಗೊಂದು ಕೆಲಸ ಸಿಗುವ ತನಕ, ಹಳ್ಳಿಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿಕೊಡುವ ವ್ಯವಸ್ಥೆ ಮಾಡಿಕೊಂಡ. ಗಣಿತದ ಮೇಲೆ ಉತ್ತಮ ಹಿಡಿತವಿದ್ದರಿಂದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಬಶೀರ್‌ನ ಕ್ಲಾಸಿಗೆ ಬರತೊಡಗಿದರು. ನಿಧಾನವಾಗಿ ಆತನ ಬದುಕಿನಲ್ಲಿ ಪರಿವರ್ತನೆಗಳು ಪ್ರಾರಂಭವಾದವು.
ರಾತ್ರಿ ಮರಳು ದಂಡೆಯ ಮೇಲೆ ನಡೆಯುತ್ತಾ ಆಗಸದಲ್ಲಿ ಮೂಡಿದ್ದ ನಕ್ಷತ್ರಗಳನ್ನು ನೋಡುತ್ತಾ ತನ್ನ ಅಪ್ಪನಿಗೆ ಹೇಳಿದ: "ನೋಡು ಅಪ್ಪ, ನಾನು ನಿನ್ನ ಆಸೆಯಂತೆ ಇಂಜಿನಿಯರ್ ಆಗಲಿಲ್ಲ. ಆದರೆ, ಎಂಜಿನಿಯರ್ ಆಗುವಂತಹ ನೂರಾರು ವಿದ್ಯಾರ್ಥಿಗಳ ಕನಸುಗಳನ್ನು ಕಟ್ಟುತ್ತಿದ್ದೇನೆ. ಅವರಿಗೆ ಬದುಕಿನ ಪಾಠ ಕಲಿಸಿದ್ದೇನೆ. ನಿನ್ನಂತೆ ನೂರಾರು ತಂದೆ ತಾಯಿಗಳ ಬದುಕಿಗೆ ಕನಸಿನ ರಂಗವಲ್ಲಿಯನ್ನು ಅವರು ಕಟ್ಟುತ್ತಾರೆ." ಅಷ್ಟು ಹೇಳುವ ವೇಳೆಗೆ ಆತನ ಕಣ್ಣಂಚಿನಲ್ಲಿ ನೀರು ಜಿನುಗಿದ್ದವು. ಮನಸ್ಸಿನ ಕನ್ನಡಿಯಲ್ಲಿ ಕನಸುಗಳ ಪ್ರತಿಬಿಂಬ ಮೂಡತೊಡಗಿದ್ದವು...
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಆಕೆ ಚಿತ್ರದಲ್ಲಿ ಆತನ ತಾಯಿಯ ಪಾತ್ರ ನಿರ್ವಹಿಸಿದ್ದರು. ಆದರೆ, 'ಮದರ್ ಇಂಡಿಯ' ಚಿತ್ರದ ಚಿತ್ರೀಕರಣದಲ್ಲಿ ನರ್ಗೀಸ್... |
| |
|
|
|
|
 | | AP |
| | |
| |
|
|
|
|
|
| ವಾಣಿಜ್ಯ ಲೇಖನಗಳು - ಭಾರತೀಯ ತೈಲ ನಿಗಮ(ಇಂಡಿಯನ್ ಆಯಿಲ್ ಕಾರ್ಪೊರೇಶನ್-ಐಒಸಿ)ವು ಹೊಸ 15 ದಶಲಕ್ಷ ಟನ್ ತೈಲ... |
| |
|
|
|
|
|
|
|