|
| ಚಿತ್ರಮಂಡಳಿ ಸಮಸ್ಯೆ ಸಿಕ್ಕು ಬಿಡಿಸುವರೇ ಜಯಮಾಲಾ? |
| ಬೆಂಗಳೂರು, ಸೋಮವಾರ, 7 ಜುಲೈ 2008 ( 16:05 IST ) | |
ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು, ಒಳ ನಡೆದಷ್ಟು ಕ್ಷುಲ್ಲಕ ರಾಜಕೀಯ, ಯಾವುದಾದರೊಂದು ವಿಷಯಕ್ಕಾಗಿ ವರ್ಷಗಳಿಂದಲೂ ನಡೆಯುತ್ತಲೇ ಬಂದಿರುವ ಪ್ರತಿಭಟನೆ, ಹೋರಾಟ. ಇದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಮಸ್ಯೆಗಳ ಒಂದು ನೀಲನಕಾಶೆ. ಈ ನಡುವೆಯೇ ಮಂಡಳಿಯ ಅಧ್ಯಕ್ಷೆಯಾಗಿ ಡಾ. ಜಯಮಾಲಾ ಆಯ್ಕೆಯಾಗಿದ್ದಾರೆ. ಮಂಡಳಿಯ ಇತಿಹಾಸದಲ್ಲೇ ಒಬ್ಬ ಮಹಿಳೆ ಮಂಡಳಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಇದೇ ಮೊದಲು. ಡಾ. ರಾಜ್ ಕೂಡಾ ಮಹಿಳೆಯೊಬ್ಬರು ಮಂಡಳಿಯ ಮಹಿಳಾ ಅಧ್ಯಕ್ಷೆಯಾಗಬೇಕೆಂದು ಕನಸು ಕಂಡಿದ್ದರು. ಆ ಕನಸು ಈಗ ಈಡೇರಿದೆ. ಜಯಮಾಲಾ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಸದಾ ಚಟುವಟಿಕೆಗಳಿಂದ ಕೂಡಿದ್ದಾರೆ. ಮಂಡಳಿಯ ಸದಸ್ಯರೊಂದಿಗೆ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ಚರ್ಚಿಸಿದ್ದಾರೆ. ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಹುಡುಕುತ್ತಾ ಹೋದರೆ ಹೆಜ್ಜೆಗೂ ಸಮಸ್ಯೆಗಳು ಕಾಣುತ್ತವೆ. ಇವೆಲ್ಲವನ್ನೂ ಸಮರ್ಥವಾಗಿ ಎದುರಿಸುವುದು ಜಯಮಾಲಾ ಅವರ ಎದುರಿರುವ ಒಂದು ಸವಾಲು.
ಚಿತ್ರ ಬಿಡುಗಡೆಯಾಗಿ ಒಂದು ವಾರದೊಳಗಡೆ ಆ ಚಿತ್ರದ ಸಿಡಿಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ. ಕೋಟಿಗಟ್ಟಲೇ ಹಣ ಸುರಿದು ಚಿತ್ರ ನಿರ್ಮಾಣ ಮಾಡಿದ ನಿರ್ಮಾಪಕರು ಇದರಿಂದ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಈ ರೀತಿಯ ಪೈರಸಿ ಹಾವಳಿ ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ. ಹಿಂದೆ ಕೇವಲ ಆಡಿಯೋಗಳನ್ನಷ್ಟೇ ಪೈರಸಿ ಮಾಡುತ್ತಿದ್ದರೆ, ಈಗ ವಿಡಿಯೋಗಳನ್ನು ಪೈರಸಿ ಮಾಡಿ ಮಾರಾಟ ಮಾಡುವ ದೊಡ್ಡ ಜಾಲವೇ ನಗರದಲ್ಲಿ ಬೆಳೆಯುತ್ತಿದೆ. ಇತ್ತೀಚೆಗೆ ನಿರ್ಮಾಪಕ ಕೆ. ಮಂಜು ತಮ್ಮ ನಿರ್ಮಾಣದ 'ಅರಮನೆ' ಚಿತ್ರವನ್ನು ಪೈರಸಿ ಮಾಡಿ ಮಾರಾಟ ಮಾಡುತ್ತಿದ್ದವನನ್ನು ಸ್ವತ: ಅವರೇ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯಾರ ಚಿತ್ರಗಳು ಹೆಚ್ಚಾಗಿ ಪೈರಸಿ ಹಾವಳಿಗೆ ಒಳಗಾಗುತ್ತವೇ? ಪೈರಸಿ ಮಾಡುವವರು ಕೂಡಾ ಹೊಸ ಹುಡುಗರ ಚಿತ್ರಗಳನ್ನು ಪೈರಸಿ ಮಾಡುವಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ. ಗಣೇಶ್ ಚಿತ್ರಗಳು ಹೆಚ್ಚಾಗಿ ಪೈರಸಿಗೊಳ್ಳಗಾಗುತ್ತವೆ. ಸದ್ಯದ ಮಟ್ಟಿಗೆ ಇವರ ಚಿತ್ರಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ 15 ರೂ. ನಲ್ಲಿ ಕ್ಯಾಸೆಟ್ ಪಡೆದು ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ಚಿತ್ರ ನೋಡುತ್ತಾರೆ. ನಂತರದ ಸ್ಥಾನದಲ್ಲಿ ಪುನೀತ್ ಹಾಗೂ ದರ್ಶನ್ ಚಿತ್ರಗಳು ಪೈರಸಿನಲ್ಲಿ ಹೆಚ್ಚು ಬೇಡಿಕೆ ಗಳಿಸಿವೆ.
ಈ ಪೈರಸಿಯನ್ನು ತಡೆಗಟಗಟ್ಟಲು ಇದರ ವಿರುದ್ಧ ಗೂಂಡಾ ಕಾಯ್ದೆ ತರಬೇಕೆಂದು ಚಿತ್ರಮಂಡಳಿ ಒತ್ತಾಯಿಸುತ್ತಲೇ ಇದೆ. ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಜಯಮಾಲಾ ಕೂಡಾ ಇದೇ ಮಾತನ್ನು ಹೇಳಿ ಕಾಯ್ದೆಯನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪರಭಾಷಾ ಚಿತ್ರಗಳ ಸ್ಪರ್ಧೆಯ ನಡುವೆ ಪೈಪೋಟಿಯೊಡ್ಡುವ ನಿಟ್ಟಿನಲ್ಲಿ ನಿರ್ಮಾಪಕರು ಕೋಟಿಗಟ್ಟಲೆ ವ್ಯಯಿಸಿ ಒಳ್ಳೆಯ ಚಿತ್ರ ಮಾಡುತ್ತೇವೆ. ಆದರೆ ಈ ರೀತಿ ಪೈರಸಿ ಹಾವಳಿಯಿಂದ ಚಿತ್ರಮಂದಿರಕ್ಕೆ ಜನ ಬಾರದೇ ನಿರ್ಮಾಪಕರು ಬಿಕರಿಯಾಗಬೇಕಾಗಿದೆ ಎಂಬುದು ನಿರ್ಮಾಪಕ ಸಾ.ರಾ. ಗೋವಿಂದು ಅಭಿಪ್ರಾಯ.
ಚಿತ್ರರಂಗದಲ್ಲಿ ಸಬ್ಸಿಡಿ ವಿವಾದ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಆಶ್ಲೀಲ, ರೀಮೇಕ್ ಹಾಗೂ ಕ್ರೌರ್ಯ ಬಿಂಬಿಸುವ ಚಿತ್ರಗಳಿಗೆ ಸರ್ಕಾರ ಸಬ್ಸಿಡಿ ನೀಡುವುದಿಲ್ಲ. ಉಳಿದಂತೆ ಸರ್ಕಾರ ವರ್ಷಕ್ಕೆ 30 ಚಿತ್ರಗಳಿಗೆ ಸಬ್ಸಿಡಿ ನೀಡುತ್ತದೆ. ಅಧ್ಯಕ್ಷೆಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಯಮಾಲಾ, ಮೇಲಿನ ಮೂರು ವಿಭಾಗಗಳ ಚಿತ್ರಗಳಿಗೆ ಹೊರತುಪಡಿಸಿ ಇತರ ಚಿತ್ರಗಳಾದ ವಾಣಿಜ್ಯ, ಕಲಾತ್ಮಕ ಹಾಗೂ ಇತರ ಉತ್ತಮ ಚಿತ್ರಗಳಿಗೆಲ್ಲ ಸರ್ಕಾರ ಸಬ್ಸಿಡಿ ನೀಡಬೇಕು. ಯಾಕೆಂದರೆ ನಿರ್ಮಾಪಕನಿಗೆ ಕೊನೆಗೆ ಉಳಿಯುವ ಹಣ ಕೇವಲ ಸಬ್ಸಿಡಿಯೊಂದೇ. ಇದರಿಂದ ಸಬ್ಸಿಡಿ ನೀಡುವ ಚಿತ್ರಗಳ ಪ್ರಮಾಣವನ್ನು ಕೂಡಾ ಸರ್ಕಾರ ಹೆಚ್ಚಿಸಬೇಕು ಎಂದಿದ್ದಾರೆ.
ಕಲಾತ್ಮಕ ಚಿತ್ರಗಳಿಗೆ ಇವತ್ತು ಚಿತ್ರಮಂದಿರಗಳು ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಚಿತ್ರಮಂದಿರದ ಮಾಲೀಕರು ಕಲಾತ್ಮಕ ಚಿತ್ರಗಳಿಗೆ ಥಿಯೇಟರ್ ನೀಡುವಂತೆ ಪ್ರೊತ್ಸಾಹಿಸುವ ಜವಾಬ್ದಾರಿಯೂ ಜಯಮಾಲಾ ಮೇಲಿದೆ.
ಪರಭಾಷಾ ನಟಿಯರ ಹಾಗೂ ಗಾಯಕರ ಆಮದಿನ ಬಗ್ಗೆಯೂ ಇವರು ಮಾತನಾಡಿದ್ದಾರೆ. ಪ್ರತಿಭೆಯ ವಿಷಯದಲ್ಲಿ ಹೆಚ್ಚು ಮಡಿವಂತಿಕೆ ಇರಬಾರದು. ಆದರೂ ನಮ್ಮ ನೆಲದ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡಬೇಕು. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ. ಆದರೆ ಈ ಭರವಸೆಗಳೆಲ್ಲ ಈಡೇರಬೇಕಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಬದಲಾಗಬೇಕು. ಆಗ ಮಾತ್ರ ಸಾಧ್ಯ.
ಗಾಂಧಿನಗರದ ಚಿತ್ರಮಂದಿಯ ನೂರಾರು ಸಮಸ್ಯೆಗಳನ್ನು ಪರಿಹರಿಸಿ ಒಬ್ಬ ಸಮರ್ಥ ಅಧ್ಯಕ್ಷೆಯಾಗಿ ಜಯಮಾಲಾ ಹೊರ ಹೊಮ್ಮುತ್ತಾರೆಯೇ ಎಂದು ಕಾದು ನೋಡಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು? |
| |
|
|
|
|
|
|
|